Loading

wait a moment

ಕಾಶ್ಮೀರದಲ್ಲಿ ನಿಗೂಢ ಬೇಟೆ: ಸೇನಾ ನೆಲೆ ಮೇಲೆ ಕಣ್ಣಿಟ್ಟಿದ್ದ 6 ಜನ ಐಎಸ್​ಐ ಏಜೆಂಟ್​ಗಳ ಸೆರೆ

ಶ್ರೀನಗರ: ಪುಲ್ವಾಮಾ ದಾಳಿಯ ಬಳಿಕ ಜಮ್ಮು-ಕಾಶ್ಮೀರದಲ್ಲಿರುವ ಉಗ್ರರನ್ನು ಮಟ್ಟಹಾಕಲು ದಿಟ್ಟ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆಗೆ ಮತ್ತೊಂದು ಭರ್ಜರಿ ಯಶಸ್ಸು ದೊರೆತಿದೆ. ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್​ಐ ಪ್ರಚೋದನೆಯಿಂದ ಕಾಶ್ಮೀರದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ 6 ಬೇಹುಗಾರರನ್ನು ಭದ್ರತಾ ಪಡೆಗಳು ಬಂಧಿಸಿವೆ. ಬಂಧಿತ ಆರೂ ಗೂಢಚಾರರು ಐಎಸ್​ಐನ ಕರ್ನಲ್ ಶ್ರೇಣಿಯ ಅಧಿಕಾರಿಯೊಂದಿಗೆ ನೇರ ಸಂಪರ್ಕದಲ್ಲಿದ್ದರು. ಅವರಿಂದ ಸೇನಾ ನೆಲೆಗಳು, ಸೂಕ್ಷ್ಮ ಪ್ರದೇಶಗಳು, ಸೇನಾ ಕಾರ್ಯಾಚರಣೆಯ ವಿಡಿಯೋ, ಫೋಟೋ ಸೇರಿ ಮತ್ತಿತರ ಸೂಕ್ಷ್ಮ ಮಾಹಿತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಪುಲ್ವಾಮಾ ಮಾದರಿಯಲ್ಲೇ ಕಾಶ್ಮೀರದಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ಎಸಗಲು ಭಾರಿ ಸಂಚು ನಡೆಯುತ್ತಿದೆ ಎಂಬ ಗುಪ್ತಚರದಳದ ಎಚ್ಚರಿಕೆ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.

ಹಿಜ್ಬುಲ್ ನಂಟು: ಐಎಸ್​ಐ ಜತೆಗೆ ಬಂಧಿತರೆಲ್ಲರೂ ಕಾಶ್ಮೀರ ಗಡಿಯಲ್ಲಿ ಸಕ್ರಿಯವಾಗಿರುವ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯೊಂದಿಗೂ ನಂಟು ಹೊಂದಿದ್ದ ರೆಂಬುದು ವಿಚಾರಣೆಯಲ್ಲಿ ತಿಳಿದು ಬಂದಿದೆ.

ವಿಚಾರಣೆಯಲ್ಲಿ ಬೆಳಕಿಗೆ: ಐಎಸ್​ಐ ಪರ ಗೂಢಚಾರಿಕೆ ನಡೆಸುತ್ತಿದ್ದ ಇಬ್ಬರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ಜಮ್ಮುವಿನ ರತ್ನುಚಕ್ ಸೇನಾನೆಲೆ ಬಳಿ ವಿಡಿಯೋ ಚಿತ್ರೀಕರಣ ಮತ್ತು ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿತ್ತು. ದೊಡಾ ಜಿಲ್ಲೆಯ ಮುಶ್ತಾಕ್ ಅಹ್ಮದ್ ಮಲಿಕ್(38) ಮತ್ತು ಕಥುವಾ ಜಿಲ್ಲೆಯ ನದೀಮ್ ಅಖ್ತರ್(24)ನನ್ನು ವಿಚಾರಣೆಗೊಳಪಡಿಸಿದಾಗ ಜಮ್ಮುವಿನಲ್ಲಿ ಗೂಢಚಾರಿಗೆಯಲ್ಲಿ ತೊಡಗಿರುವ ಉಳಿದ ನಾಲ್ವರ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಸದ್ದಾಂ ಹುಸೇನ್, ಮೊಹಮ್ಮದ್ ಸಲೀಂ, ಮೊಹಮ್ಮದ್ ಶಾಫಿ ಮತ್ತು ಸಫ್ದರ್ ಅಲಿಯನ್ನು ಬಂಧಿಸಲಾಗಿದೆ. ಇವರಲ್ಲಿ ಸಫ್ದರ್ ಉಧಂಪುರ ಜಿಲ್ಲೆಯ ಬಸಂತಗಢದವನಾಗಿದ್ದರೆ ಉಳಿದ ಮೂವರು ಕಥುವಾ ಜಿಲ್ಲೆಯವರಾಗಿದ್ದಾರೆ.

ಉಗ್ರ ಪೋಷಕರು: ಪ್ರಾಥಮಿಕ ವಿಚಾರಣೆ ವರದಿ ಪ್ರಕಾರ ಬಂಧಿತರೆಲ್ಲರೂ ಇತ್ತೀಚೆಗೆ ಜಮ್ಮುಕಾಶ್ಮೀರದಲ್ಲಿ ತೀವ್ರತೆ ಕಳೆದುಕೊಳ್ಳುತ್ತಿರುವ ಉಗ್ರವಾದ ವನ್ನು ಬೆಳೆಸುವ ಹೊಣೆಗಾರಿಕೆ ಹೊತ್ತಿದ್ದರು. ಐಎಸ್​ಐ ಅಧಿಕಾರಿ ಸೂಚನೆ ಮೇರೆಗೆ ಹಾಗೂ ಹಿಜ್ಬುಲ್ ಕಮಾಂಡರ್ ಮಾರ್ಗದರ್ಶನ ಪಡೆದು ಇವರೆಲ್ಲ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಕಮಾಂಡರ್ ಮೂಲತಃ ಜಮ್ಮುವಿನವನಾಗಿದ್ದು, ಉಗ್ರ ಸಂಘಟನೆಯಲ್ಲಿ ಸಕ್ರಿಯನಾದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ.

ಅಲ್​ಖೈದಾಗೆ ಕಮಾಂಡರ್: ಜಮ್ಮು-ಕಾಶ್ಮೀರದ ಅಲ್​ಖೈದಾ ಕಮಾಂಡರ್ ಜಾಕಿರ್ ಮೂಸಾನನ್ನು ಕಳೆದ ತಿಂಗಳು ಎನ್​ಕೌಂಟರ್ ಮಾಡಿ ಹತ್ಯೆಗೈದ ಹಿನ್ನೆಲೆಯಲ್ಲಿ ನೂತನ ಕಮಾಂಡರ್ ಆಗಿ ಅಬ್ದುಲ್ಲಾ ಹಮೀದ್ ಲೆಲಹಾರಿ (ಹಾರುನ್ ಅಬ್ಬಾಸ್)ನನ್ನು ನೇಮಿಸಲಾಗಿದೆ.

ಜನತೆಗೆ ಪ್ರತೀಕಾರದ ಪ್ರಚೋದನೆ

*ಕಾಶ್ಮೀರದ ಜನತೆಯಲ್ಲಿ ಭಾರತೀಯ ಸೇನೆ ವಿರುದ್ಧ ದ್ವೇಷ ಬಿತ್ತುವುದೇ ಬಂಧಿತ ಈ ಗೂಢಚಾರರ ಉದ್ದೇಶವಾಗಿತ್ತು

*ಸೇನಾ ಕಾರ್ಯಾಚರಣೆ ವೇಳೆ ಗಾಯಗೊಳ್ಳುವ ಸ್ಥಳೀಯರ ಫೋಟೋ, ವಿಡಿಯೋಗಳನ್ನು ನಿರಂತರವಾಗಿ ತೋರಿಸಿ ಉಗ್ರವಾದದತ್ತ ಯುವಕರನ್ನು ಸೆಳೆಯಲಾಗುತ್ತದೆ

*ಅಮಾಯಕರ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಂಡು, ಹಣದ ಆಮಿಷವೊಡ್ಡಿ ಕೈಗಳಿಗೆ ಬಂದೂಕು ಕೊಡಲಾಗುತ್ತದೆ

ಇನ್ನಷ್ಟು ಜನರಿಗೆ ಬಲೆ

ಬಂಧಿತ ಗೂಢಚಾರರು ನೀಡಿರುವ ಮಾಹಿತಿ ಪ್ರಕಾರ ಕಾಶ್ಮೀರದಾದ್ಯಂತ ಇಂತಹ ಹತ್ತಾರು ಗೂಢಚಾರರು ಐಎಸ್​ಐ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಂಧಿತರನ್ನು ಮತ್ತಷ್ಟು ವಿಚಾರಣೆಗೊಳಪಡಿಸಿದ ಬಳಿಕ ಇನ್ನಷ್ಟು ಜನರನ್ನು ಬಂಧಿಸುವ ನಿರೀಕ್ಷೆಯಿದೆ. ಸದ್ಯ ಐಎಸ್​ಐ ಅಧಿಕಾರಿಯ ಮೊಬೈಲ್ ನಂಬರ್​ಗಳು ಸಿಕ್ಕಿದ್ದು, ಇದರ ಮೂಲಕ ಇನ್ನಷ್ಟು ಮಾಹಿತಿಗಳನ್ನು ಕಲೆಹಾಕಲು ಮತ್ತು ಮುಂದಿನ ಯೋಜನೆಗಳ ಬಗ್ಗೆ ತಿಳಿಯಲು ಶ್ರಮಿಸಲಾಗುವುದೆಂದು ಸೇನೆ ತಿಳಿಸಿದೆ.

ಕನ್ನಡಿಗನಿಗೆ ಗುಂಡೇಟು

ಮಡಿಕೇರಿ: ರಾಷ್ಟ್ರೀಯ ರೈಫಲ್​ನಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗು ಮೂಲದ ಶೌರ್ಯಚಕ್ರ ಪುರಸ್ಕೃತ ವೀರ ಯೋಧ ಎಚ್.ಎನ್.ಮಹೇಶ್ ಉಗ್ರರ ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಅವರ ಮುಖದ ಭಾಗಕ್ಕೆ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ಮೇ 29ರಂದು ಜಮ್ಮು-ಕಾಶ್ಮೀರದ ಶೋಪಿಯಾನ್ ಮನೆಯೊಂದರಲ್ಲಿ ಅಡಗಿಕೊಂಡಿದ್ದ ನಾಲ್ವರು ಉಗ್ರರ ವಿರುದ್ಧ ಕಾರ್ಯಾಚರಣೆ ವೇಳೆ ಈ ಅವಘಡ ನಡೆದಿದೆ. ಪೊನ್ನಂಪೇಟೆಯವರಾದ ಮಹೇಶ್ ಪ್ರಸ್ತುತ ಪಂಜಾಬಿನ ಚಂಡೀಗಡ ಆರ್ವಿು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಲ್ವರು ಉಗ್ರರ ಹತ್ಯೆ

ಪಾಕ್ ಗೂಢಚಾರರ ಬಂಧನದ ಬೆನ್ನಲ್ಲೇ ಪುಲ್ವಾಮಾದಲ್ಲಿ ಶುಕ್ರವಾರ ನಡೆದ ಸೇನಾ ಕಾರ್ಯಾಚರಣೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರು ಳಿಸಲಾಗಿದೆ. ದಕ್ಷಿಣ ಕಾಶ್ಮೀರದ ಪಂಜ್ರನ್​ನಲ್ಲಿ ಉಗ್ರರ ಇರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳಿಗೆ ಎದುರಾದ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ ಭದ್ರತಾ ಪಡೆಗಳು ನಾಲ್ವರು ಉಗ್ರರನ್ನು ಎನ್​ಕೌಂಟರ್ ಮಾಡಿವೆ. ಮೃತ ಉಗ್ರರಲ್ಲಿ ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಯನ್ನು ತೊರೆದು ಉಗ್ರ ಸಂಘಟನೆ ಸೇರಿಕೊಂಡಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳಾದ ಮೊಹಮ್ಮದ್ ಸಲ್ಮಾನ್ ಖಾನ್ ಮತ್ತು ಶಬೀರ್ ಅಹ್ಮದ್ ದಾರ್ ಸೇರಿದ್ದಾರೆ. ಇನ್ನಿಬ್ಬರನ್ನು ಆಶಿಕ್ ಹುಸೇನ್ ಗಾನಾಯಿ ಮತ್ತು ಇಮ್ರಾನ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ. ಅಹ್ಮದ್ ಮತ್ತು ಗಾನಾಯಿ ಈ ಹಿಂದೆ ಜಮ್ಮು- ಕಾಶ್ಮೀರದಲ್ಲಿ ನಡೆದಿದ್ದ ಹಲವು ದಾಳಿಯಲ್ಲಿ ಪಾಲ್ಗೊಂಡಿದ್ದರು. ದಾಳಿ ನಡೆದ ಸ್ಥಳದಿಂದ ಹಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Leave a Reply

Your email address will not be published. Required fields are marked *